ನರಸಿಂಹ 1 -
	ವಿಷ್ಣುವಿನ ದಶಾವತಾರದಲ್ಲಿ ನಾಲ್ಕನೆಯದು. ಸಿಂಹದಂತೆ ಮುಖವಿದ್ದು ಮಿಕ್ಕ ಅಂಗಗಳೆಲ್ಲ ಮನುಷ್ಯನ ಹಾಗೆ ಇದ್ದುದರಿಂದ ಈ ಹೆಸರು ಬಂದಿತು. ವಿಷ್ಣುವಿನ ದ್ವಾರಪಾಲಕರಾದ ಜಯವಿಜಯರು ಶಾಪಗ್ರಸ್ತರಾಗಿ ದಿತಿಯಲ್ಲಿ ಹಿರಣ್ಯಾಕ್ಷ ಹಿರಣ್ಯಕಶಿಪುವಾಗಿ ಹುಟ್ಟಿದರು. ಇವರು ದೇವತೆಗಳ ಪರಮಶತ್ರುಗಳಾಗಿ ಲೋಕಕಂಟಕರಾಗಿದ್ದರು. ಭೂದೇವಿಯನ್ನು ಹಿಂಸಿಸಲು ಹೋದ ಹಿರಣ್ಯಾಕ್ಷನನ್ನು ಹರಿ ವರಾಹಾವತಾರಿಯಾಗಿ ಸಂಹರಿಸಿದ. ತಮ್ಮನ ಮರಣದಿಂದ ಹರಿದ್ವೇಷಿಯಾದ ಹಿರಣ್ಯಕಶಿಪು ದೇವತೆಗಳನ್ನೂ ಬ್ರಾಹ್ಮಣರನ್ನೂ ಹಿಂಸಿಸತೊಡಗಿದ. ಈತ ಬ್ರಹ್ಮನನ್ನು ಕುರಿತು ಅಖಂಡ ತಪಸ್ಸನ್ನಾಚರಿಸಿ ಸೃಷ್ಟಿಯೊಳಗಿರುವ ಮನುಷ್ಯ, ಮೃಗ, ದೇವ, ದಾನವರಾರಿಂದಲೂ ಭೂಮಿಯ ಮೇಲಾಗಲಿ ಅಂತರಿಕ್ಷದಲ್ಲಾಗಲಿ ಯಾರಿಂದಲೂ ಯಾವ ಆಯುಧದಿಂದಲೂ ತನಗೆ ಸಾವು ಬಾರದೆಂದು ವರವನ್ನು ಪಡೆದ.

	ವರ ಪಡೆದ ಈತ ಮೂರು ಲೋಕಗಳನ್ನು ತನ್ನ ಅಧೀನಕ್ಕೆ ತೆಗೆದುಕೊಂಡ. ಇಂದ್ರನನ್ನು ಸೋಲಿಸಿ ಸ್ವರ್ಗವನ್ನೇ ರಾಜಧಾನಿಯನ್ನಾಗಿಸಿಕೊಂಡ. ದೇವತೆಗಳೆಲ್ಲ ತನ್ನನ್ನು ಆರಾಧಿಸುವಂತೆ ಆಜ್ಞಾಪಿಸಿದ. ದಿಕ್ಕುಗೆಟ್ಟ ಇಂದ್ರಾದಿ ದೇವತೆಗಳು ಮಹಾವಿಷ್ಣುವಿನ ಮೊರೆಹೊಕ್ಕರು. ವಿಷ್ಣು ಅಭಯ ಪ್ರಧಾನ ಮಾಡಿ ಅವರೆಲ್ಲರನ್ನೂ ಕಳುಹಿಸಿದ.

	ಇತ್ತ ಹಿರಣ್ಯಕಶಿಪುವಿನ ಮಗನಾದ ಪ್ರಹ್ಲಾದ ಬಾಲ್ಯದಿಂದಲೇ ಹರಿಭಕ್ತನಾಗಿದ್ದ. ಗುರುವಿಗೂ ತಂದೆಗೂ ಹರಿಭಕ್ತಿಯನ್ನು ಬೋಧಿಸಹೊರಟ ಮಗನನ್ನು ಕಂಡು ಕುಪಿತನಾದ ತಂದೆ ಆತನನ್ನು ಕೊಲ್ಲಲು ಶೂಲಗಳಿಂದ ತಿವಿಸಿದ. ಆನೆಗಳಿಂದ ತುಳಿಸಿದ. ಹಾವುಗಳಿಂದ ಕಡಿಸಿದ. ಪರ್ವತದಿಂದ ನೂಕಿಸಿದ. ವಿಷ ಕುಡಿಸಿದ. ಸಮುದ್ರದಲ್ಲಿ ಹಾಕಿಸಿದ. ಬೆಂಕಿಯಲ್ಲಿ ಬೀಳಿಸಿದ. ಗುಂಡಿಯಲ್ಲಿ ಹುಗಿಸಿದ. ಹರಿಭಕ್ತನಾದ ಪ್ರಹ್ಲಾದನನ್ನು ಕೊಲ್ಲಿಸಹೋದ ಮಾರ್ಗಗಳೊಂದೂ ಸಫಲವಾಗಲಿಲ್ಲ.

	ಸರ್ವಾಂತರ್ಯಾಮಿಯಾದ ಹರಿಯನ್ನು ಮಗ ತನ್ನೆದುರಿಗೇ ಸ್ತುತಿಸಿದಾಗ ಸಿಟ್ಟಿಗೆದ್ದ ಹಿರಣ್ಯಕಶಿಪು ಹರಿಯನ್ನು ತನ್ನೆದುರಿನಲ್ಲಿರುವ ಕಂಬದಲ್ಲಿ ತೋರಿಸುವಂತೆ ಹೇಳಿ ಕತ್ತಿಯನ್ನು ಹಿರಿದು ಮಗನ ತಲೆಯನ್ನು ಕಡಿಯಲು ಹೋದಾಗ ಭಯಂಕರ ಶಬ್ದವಾಗಿ ಕಂಬ ಇಬ್ಭಾಗವಾಗಿ ನರಸಿಂಹ ಪ್ರತ್ಯಕ್ಷನಾದ. ಕಾದಲು ಹೋದ ಹಿರಣ್ಯಕಶಿಪುವನ್ನು ಹಿಡಿದು ಹೊಸ್ತಿಲ ಮೇಲೆ ಕುಳಿತು ತೊಡೆಯ ಮೇಲೇರಿಸಿಕೊಂಡು ಹರಿತವಾದ ಉಗುರುಗಳಿಂದ ಹೊಟ್ಟೆಯನ್ನು ಬಗೆದು ಅವನ ಕರುಳನ್ನು ಕುತ್ತಿಗೆಗೆ ಮಾಲೆಯಾಗಿ ಹಾಕಿಕೊಂಡ. ಇದರಿಂದ ಸಂತುಷ್ಟರಾದ ದೇವತೆಗಳು ನರಹರಿಯನ್ನು ಸ್ತುತಿಸಿದರು. ತನ್ನನ್ನು ಪ್ರಾರ್ಥಿಸಿದ ಪ್ರಹ್ಲಾದನನ್ನು ಹರಸಿ ಹರಿ ಅಂತರ್ಧಾನನಾದ.

	ಲಕ್ಷ್ಮೀನರಸಿಂಹ, ಯೋಗಾನರಸಿಂಹ, ಭೋಗಾನರಸಿಂಹ ಎಂಬ ಹೆಸರಿನಿಂದ ನರಹರಿಯನ್ನು ಇಂದಿಗೂ ಜನ ಪೂಜಿಸುತ್ತಾರೆ.								
		(ಎಸ್.ಎಚ್.ಐ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ